ಪೈಕ್ ಮೀನು - 
ಎಸಾಸಿಡೀ ಕುಟುಂಬಕ್ಕೆ ಸೇರಿದ ಸಿಹಿನೀರು ಮೀನು. ಟ್ರೌಟ್, ಸಾಲ್ಮನ್, ಪಿಕರೆಲ್ ಮತ್ತು ಮಡ್‍ಮಿನೋ ಮೀನುಗಳ ಸಂಬಂಧಿ. ಇವುಗಳಂತೆಯೇ ಇದು ಕೂಡ ಖಾದ್ಯಯೋಗ್ಯವೆಂದು ಪ್ರಸಿದ್ಧವಾಗಿದೆ. ಉತ್ತರ ಗೋಳಾರ್ಧದ ಸಿಹಿನೀರು ಕೆರೆ, ಕೊಳ ಸರೋವರಗಳಲ್ಲೂ ನದಿಗಳಲ್ಲೂ ಕಾಣಬರುತ್ತದೆ. ಇದರ ವೈಜ್ಞಾನಿಕ ಹೆಸರು ಈಸಾಕ್ಸ್. ಇದರಲ್ಲಿ ಅನೇಕ ಪ್ರಭೇದಗಳುಂಟು. ಇವುಗಳ ಪೈಕಿ ಈ ಲೂಸಿಯಸ್ ಅತ್ಯಂತ ಪ್ರಮುಖವಾದ್ದು. ಇದು ಯೂರೋಪ್ ಖಂಡದಲ್ಲಿ ಸ್ಪೇನ್, ಪೋರ್ಚುಗಲ್, ದಕ್ಷಿಣ ಇಟಲಿಗಳನ್ನು ಬಿಟ್ಟು ಉಳಿದ ಪ್ರದೇಶದಲ್ಲೂ ಸೈಬೀರಿಯ ಹಾಗೂ ಉತ್ತರ ಅಮೆರಿಕಗಳಲ್ಲೂ ಕಾಣಬರುತ್ತದೆ. ಇದಕ್ಕೆ ಚೌತ್ತರೇಯ ಪೈಕ್ ಎಂಬ ಹೆಸರುಂಟು. ರಷ್ಯದ ಸೈಬೀರಿಯದ ಅಮೂರ್ ಮತ್ತು ಸಖಾಲಿನ್ ಪ್ರದೇಶಗಳಲ್ಲಿ ಈರೈಶೆರ್ಟ್ (ಅಮೂರ್ ಪೈಕ್) ಎಂಬ ಪ್ರಭೇದ ಸಿಗುತ್ತದೆ. ಅಮೆರಿಕದಲ್ಲಿ ದೊರೆಯುವ ಇನ್ನಿತರ ಪೈಕ್ ಮೀನುಗಳೆಂದರೆ ಅಲ್ಲಿಯ ಮಹಾಸರೋವರಗಳ ಬಳಿ ಇರುವ ಮುಸ್ಕೆಲಂಗೆ (ಈ ಮುಸ್ಕ್ವಿನಾಂಗಿ), ನ್ಯೂ ಇಂಗ್ಲೆಂಡ್ ಪ್ರದೇಶದಲ್ಲಿ ಸಿಕ್ಕುವ ಚೇನ್ ಪಿಕರೆಲ್ (ಈ ನೈಜರ್), ಅಯೋಧ, ಒಹ್ಡೆಯೊ, ಟೆಕ್ಸಾಸುಗಳಲ್ಲಿಯ ಈ ವರ್ಮಿಕ್ಯುಲೇಟಸ್ (ಗ್ರಾಸ್ ಪಿಕರೆಲ್) ಹಾಗೂ ಅಟ್ಲಾಂಟಿಕ್ ಕರಾವಳಿ ಪ್ರದೇಶದಲ್ಲಿಯ ಈ ಅಮೆರಿಕಾನಸ್ (ಪಿಕರೆಲ್).

ಎಲ್ಲ ಪೈಕ್ ಮೀನುಗಳೂ ಬಲಿಷ್ಠ ಮೀನುಗಳು. ದೇಹದ ಉದ್ದ 130 ಸೆಂ.ಮೀ.ಗಿಂತ ಹೆಚ್ಚಾಗಿರುವುದುಂಟು. ತೂಕ 25-60 ಕಿ.ಗ್ರಾಂ. ಸಾಮಾನ್ಯವಾಗಿ ಗಂಡಿಗಿಂತ ಹೆಣ್ಣು ಮೀನ ಗಾತ್ರದಲ್ಲಿ ದೊಡ್ಡದು. ಮೈಬಣ್ಣ ಸಾಮಾನ್ಯವಾಗಿ ಆಲಿವ್ ಹಸುರು. ಪಾಶ್ರ್ವಗಳಲ್ಲಿ ನಸುಹಳದಿ ಬಣ್ಣದ ಮಚ್ಚೆಗಳಿರುವುವು. ಉದರಭಾಗ ಬಿಳಿ ಇಲ್ಲವೆ ಹಳದಿ. ಮೂತಿ ಉದ್ದವಾಗಿದೆ. ತಲೆಬುರುಡೆಯಲ್ಲಿ ಮೀಸೊಕೋರಕಾಯಿಡ್, ಅರ್ಬಿಟೊಸ್ಟೀನಾಯಿಡ್ ಮತ್ತು ಮೀಸೆತ್ಮಾಯಿಡ್ ಮೂಳೆಗಳು ಇಲ್ಲ. ದವಡೆಗಳಲ್ಲಿ ಚೂಪಾದ ಅಸಂಖ್ಯ ಹಲ್ಲುಗಳುಂಟು. ಬೆನ್ನು ಭಾಗದ ಹಾಗೂ ಗುದದ ಈಜುರೆಕ್ಕೆಗಳು ದೇಹದ ಹಿಂಬದಿಯಲ್ಲಿ ಬಾಲಕ್ಕೆ ಹತ್ತಿರವಾಗಿ ಇವೆ.
ಪೈಕ್ ಮೀನು ಮಾಂಸಹಾರಿ. ಹೊಟ್ಟೆ ಬಾಕತನಕ್ಕೆ ಹೆಸರಾಗಿದೆ. ಇನ್ನಿತರ ಬಗೆಯ ಮೀನುಗಳು (ಕೆಲವೊಮ್ಮೆ ಬೇರೆ ಪೈಕ್ ಮೀನುಗಳು ಸಹ), ಕಪ್ಪೆ, ಹಾವು, ಕ್ರಸ್ಟೇಸಿಯ ಪ್ರಾಣಿಗಳು, ಹುಳುಗಳು, ಕೀಟಗಳು, ಕ್ರೇ ಮೀನುಗಳು, ಪಕ್ಷಿಗಳು (ಬಾತು ಮುಂತಾದವು) ಸಣ್ಣಪುಟ್ಟ ಸ್ತನಿಗಳು ಇದರ ಪ್ರಧಾನ ಆಹಾರ. ಸಾಮಾನ್ಯವಾಗಿ ಜೊಂಡು ಬೆಳೆದಿರುವಂಥ ಕೆರೆಯ ಅಂಚುಗಳಲ್ಲಿ ಹೊಂಚುಹಾಕಿ ಕಾದಿದ್ದು ಎರೆ ಪ್ರಾಣಿ ಹತ್ತಿರ ಸುಳಿದಾಗ ಅದರ ಮೇಲೆ ರಭಸದಿಂದ ಎರಗಿ ಹಿಡಿದು ಕಬಳಿಸುತ್ತದೆ. ಕೆಲವೊಮ್ಮೆ ಎರೆಗಳನ್ನು ಬೆನ್ನಟ್ಟಿ ಹೋಗಿ ಹಿಡಿಯುವುದೂ ಉಂಟು.

ಪೈಕ್ ಮೀನು ಮೊಟ್ಟೆಯಿಡುವ ಪ್ರಾಯ ಮಾರ್ಚಿ-ಮೇ ತಿಂಗಳುಗಳು. ನೀರಿನಲ್ಲಿ ಬೆಳೆಯುವ ಗಿಡಗಳಿಗೆ ಮೊಟ್ಟೆಗಳನ್ನು ಅಂಟಿಸಿ ಇಡುವುದು. ಹೆಣ್ಣು ಪೈಕ್ ಮೀನು ಒಂದೇ ಸಲಕ್ಕೆ 100,000 ದಿಂದ 1,000,000 ಮೊಟ್ಟೆಗಳನ್ನು ಇಡುತ್ತದೆ. ಮೊಟ್ಟೆಗಳನ್ನು ಹಗಲಿನಲ್ಲೇ ಇಡುವುದು. ಸುತ್ತಣ ಉಷ್ಣತೆಯನ್ನು ಅಲಂಬಿಸಿ 1-4 ವಾರಗಳಲ್ಲಿ ಮೊಟ್ಟೆಯೊಡೆದು ಮರಿಗಳು ಹೊರಬರುವುವು. ಮರಿಗಳು ಸಸ್ಯಾಹಾರಿಗಳು. 3-4 ಸೆಂ.ಮೀ. ಗಾತ್ರಕ್ಕೆ ಬೆಳೆದಾಗ ಮೀನು ತಿನ್ನಲು ಆರಂಭಿಸುವುವು.

ಪೈಕ್ ಮೀನು ಖಾದ್ಯಯೋಗ್ಯವಾಗಿದೆಯಾದರೂ ಶೋಕಿಗಾಗಿ ಇದನ್ನು ಹಿಡಿಯುವುದೇ ಹೆಚ್ಚು. 
(ಎಂ.ಎ.ಡಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ